DOI: 10.47992/ijpl.2583.9934.0014 ISSN: 2583-9934

ಕನ್ನಡ ಸಾಹಿತ್ಯಕ್ಕೆ ಹರ್ಮನ್‌ ಫೆಡ್ರಿಕ್‌ ಮೋಗ್ಲಿಂಗ್‌ ಕೊಡುಗೆ

ಸರಿತ ಮಬೆನ್‌, ರಾಜಶೇಖರ ಜಮದಂಡಿ, ಶಿವರಾಜ್‌ ಜಿ.

ಉದ್ದೇಶ: ಬಾಸೆಲ್ ಮಿಶನ್ನಿನ ಒಬ್ಬ ಪ್ರಮುಖ ಮಿಶನೆರಿಯೇ ಹೆರ್ಮನ್ ಮೋಗ್ಲಿಂಗ್‌, ಇವರು 1836ರಲ್ಲಿ ಬಾಸೆಲ್ ಸಮಿತಿಯ ಅನುಮತಿಯೊಂದಿಗೆ ಭಾರತಕ್ಕೆ ಬಂದರು. ಸರಳ ಜೀವಿಯಾಗಿದ್ದ ಇವರು ಪ್ರಾರಂಭದಲ್ಲಿ ಬೆಳಿಗ್ಗೆ ೩ ಗಂಟೆಯಿಂದ ಸಾಯಂಕಾಲದವರೆಗೆ ಕನ್ನಡ ಕಲಿಯುತ್ತಿದ್ದರು. ಕನ್ನಡ ಭಾಷೆಯ ಕಲಿಕೆಯ ಕುರಿತು ಇವರೆ ಹೇಳುವಂತೆ, "I find the Kanarese language both easy and difficult. I do not find it difficult to understand the written words. But the pronunciation will give me some word time yet of rea... now that I have difficulties with speaking foreign language I have never noticed the before" ಹೀಗೆ ಅವರಿಗೆ ಓದಿ ಅರ್ಥೈಸುವುದು ಸುಲಭವಾಗಿತ್ತೇ ಹೊರತು ವ್ಯವಹರಿಸುವುದು ಕಷ್ಟವಾಗಿ ತೋರಿತು. ಹೊಸಗನ್ನಡದ ಆದ್ಯ ಪ್ರಬಂಧಗಳೆಂದು ಗುರುತಿಸಲಾಗುವ ಜಾತಿ ವಿಚಾರಣೆ (1845), ದೇವಾ ವಿಚಾರಣೆ (1852) ಇವರ ಬರಹಗಳೇ ಆಗಿವೆ. ಯಾತ್ರಿಕನ ಸಂಚಾರ (ವೈಥೆಯೊಡನೆ) ಚಿಕ್ಕವನಾದ ಹೆನ್ರಿಯೂ ಅವನ ಬೋಯಿಯೂ (1849) ದೇವವಾಕ್ಯ ವ್ಯಾಖ್ಯಾನ, ಬಾಸೆಲ್ ಮಿಶನ್ನಿನ ಸಭಾಕ್ರಮ ಇವು ಇವರ ಇತರ ಕೃತಿಗಳು. ಕನ್ನಡ ಪತ್ರಿಕಾ ಪ್ರಪಂಚಕ್ಕೂ ಇವರೇ ಮೊದಲಿಗರು. ಮೋಗ್ಲಿಂಗ್‌ರು ಹೊಸಗನ್ನಡಕ್ಕೆ ಹಾಗೂ ಕ್ರೈಸ್ತರಿಗೆ ಕೊಟ್ಟ ಅನುಪಮ ಕಾಣಿಕೆ ಎಂದರೆ ಸಂಗೀತಗಳು, ದಾಸ ಸಾಹಿತ್ಯದ ಮೊದಲ ಸಂಪಾದಕರೇ ಎನ್ನಿಸಿಕೊಂಡ 24 ದಾಸರ ಪದಗಳನ್ನು ಜರ್ಮನ್ ಭಾಷೆಯಲ್ಲಿ ಪದ್ಯದ ರೂಪದಲ್ಲಿಯೇ ಅನುವಾದಿಸಿದರು. ಇದನ್ನು ಜರ್ಮನಿಯ ಪ್ರಾಜ್ಯ ವಿದ್ಯಾ ವಿಷಯಕವಾದ ZDMG ಪತ್ರಿಕೆಯಲ್ಲಿ ಪ್ರಕಟಿಸಿದರು (1844), ಮಿಶನ್ ಗೀತ ಪುಸ್ತಕದಲ್ಲಿ ಅತಿ ಹೆಚ್ಚು ಸಂಗೀತಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಆದ್ಯ ಭಾಷಾಂತರ ಪ್ರವರ್ತಕರೆಂದರೆ ಮೋಗ್ಲಿಂಗ್‌. ಒಟ್ಟು 410 ಗೀತೆಗಳಲ್ಲಿ ಇವರು 107 ಗೀತೆಗಳನ್ನು ರಚಿಸಿದ್ದಾರೆ. ಮೋಗ್ಲಿಂಗ್‌ರವರ ಪ್ರಾರ್ಥನೆಗೆ ಸಂಬಂಧಿಸಿದ ಗೀತೆ 'ಕನ್ನಡ ಗೀತೆಗಳು' ಎಂಬ ಗೀತ ಪುಸ್ತಕದಲ್ಲಿ ಕಾಣುತ್ತೇವೆ. ಯೇಸುವಿನ ಸ್ಪರ್ಶ ಬಾಳಿಗೆ ಹೊಸ ಚೇತನ ನೀಡುತ್ತದೆ ಎಂದು ನಂಬಿದ ಗೀತಗಾರ ಆತನ ಸ್ಪರ್ಶಕ್ಕಾಗಿ ಬೇಡಿಕೊಂಡಿದ್ದಾನೆ. ಲೋಕ ಕಾಂತಿಯೆ ಎಂಬ ಗೀತೆಯಲ್ಲಿ, ಇದು Margenglanz der Ewigkeil ಎಂಬ ಗೀತೆಯ … ಬೀಜ ಮೊಳೆಯುತ್ತದೆ ಮಳೆ ಬಿದ್ದ ಭೂಮಿಯಲ್ಲಿ ನಿನ್ನ ಮಂಜು ಬಿದ್ದರೆ ನನ್ನ ಒಣ ಆತ್ಮದಲ್ಲಿ ಹೊಸ ಜೀವ ತಾಣವು ಬಪ್ಪುದು. ಕನ್ನಡ ಗೀತೆಗಳು, ಗೀತೆ - 332 ಉಪಮೆಯ ಮೂಲಕ ಗೀತಗಾರ ಸ್ವರ್ಗವನ್ನು ವರ್ಣಿಸಿದ್ದಾರೆ. ಕವಿಯ ಸೃಜನಶೀಲತೆ ಈ ಗೀತೆಯಲ್ಲಿ ವ್ಯಕ್ತವಾಗಿದೆ. ಪಾಶ್ಚಾತ್ಯ ಮಿಶನೆರಿಯಾದ ಮೋಗ್ಲಿಂಗ್ ಕನ್ನಡ ಕ್ರೈಸ್ತ ಗೀತೆಗಳನ್ನು ಪ್ರಥಮ ಬಾರಿಗೆ ಭಾಷಾಂತರಿಸಿ ಪುಸ್ತಕ ರೂಪದಲ್ಲಿ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿಧಾನ: ೧) ಕ್ರೈಸ್ತ ಮಿಷನರಿಗಳು ೨) ಬಾಸೆಲ್‌ ಮಿಷನರಿಗಳು ೩) ಕನ್ನಡ ತಿಯೋಲಾಜಿಕಲ್‌ ಸೊಸೈಟಿ ಫಲಿತಾಂಶ: ನಾನು ಮೋಗ್ಲಿಂಗ್‌ ಅವರ ಬಗ್ಗೆ ಅಧ್ಯಯನ ಮಾಡುವಾಗ ನನಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಮೋಗ್ಲಿಂಗ್‌ ಕೇವಲ ವ್ಯಕ್ತಿಯಲ್ಲ ಈತ ಬಾಸೆಲ್‌ ಮಿಷನ್ನರಿಯ ಕನ್ನಡ ಸಾಹಿತ್ಯದ ಶಕ್ತಿ. ಈ ನನ್ನ ಲೇಖನದಿಂದ ಒಳ್ಳೆಯ ವಿಮರ್ಶೆಗಳೇ ಎದುರಗಲಿ ಅಥವಾ ಕೆಟ್ಟ ವಿಮರ್ಶೆಗಳೇ ಎದುರಾಗಲಿ ಆದರೆ ನಮ್ಮ ನಾಡಿಗೆ ನಾನಾ ದೇಶಗಳಿಂದ ಬಂದ ಕ್ರೈಸ್ತ ಮಿಷನರಿಗಳ ಕೊಡುಗೆ ಏನೆಂದು ನಮ್ಮ ನಾಡಿನ ಜನ ಅರಿತರೆ ಅಷ್ಟೇ ಸಾಕು. ಯಾವುದೇ ಒಂದು ವಸ್ತುವನ್ನು ಎಲ್ಲರೂ ಇಷ್ಟ ಪಡಬೇಕು ಎನ್ನುವಂತಿಲ್ಲ. ಆದರೆ ಕೆಲವಿಷ್ಟು ಜನರಿಗೆ ಇಷ್ಟವಾದಾಗ ಕ್ರೈಸ್ತ ಮಿಷನರಿಗಳ ಬಗ್ಗೆ ಒಲವು ಮೂಡಿ ಇನ್ನಷ್ಟು ಅಧ್ಯಯನದ ಕಡೆ ಮುಖ ಮಾಡಿದರೆ ಅಷ್ಟೇ ಸಾಕು. ಯಾಕೆಂದರೆ ನಮ್ಮ ನಾಡಿನ ಬಗ್ಗೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ಅವರು ನಮಗೆ ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮೌಲ್ಯ: ಕ್ರೈಸ್ತ ಮಿಷನರಿಗಳು ತಮ್ಮ ಮತ ಪ್ರಚಾರವನ್ನು ಮಾತ್ರ ನಮ್ಮಲ್ಲಿ ಮಾಡಲಿಲ್ಲ, ಬದಲಿಗೆ ನಮ್ಮ ನಾಡಿನ ಸಾಹಿತ್ಯ ಸಂಪತನ್ನು ತಮ್ಮ ನಾಡಿಗೂ ಕೊಂಡೋಯ್ದು ಅಲ್ಲಿಯೂ ಕೂಡಾ ಕನ್ನಡದ ಕಂಪನ್ನು ಚೆಲ್ಲಿದ್ದಾರೆ. ಈ ರೀತಿಯ ಹಲವಾರು ಮೌಲ್ಯಯುತ ವಿಷಯಗಳ ಬಗ್ಗೆ ನಮಗೆಲ್ಲರಿಗೂ ಅರಿವು ಮೂಡಬೇಕು. ನಾವು ಕನ್ನಡ ಸಾಹಿತ್ಯದ ಬಗ್ಗೆ ಅವರಷ್ಟೇ ಪ್ರೀತಿ, ಆಸಕ್ತಿಯನ್ನು ಹೊಂದಿ ಇನ್ನಷ್ಟು ಕನ್ನಡದ ಬಗ್ಗೆ ಗೌರವವನ್ನು ಬೆಳೆಸಿಕ್ಕೊಂಡು, ಅಧ್ಯಯನವನ್ನು ಹೆಚ್ಚು ಮಾಡಬೇಕು. ಪ್ರಕಾರ: ಪರಿಕಲ್ಪನಾ ಸಂಶೊಧನೆ.

More from our Archive